Friday, July 17, 2009

ನಾನು, ಅನಂತತೆ, ಅಸ್ತಿತ್ವ

ಓ ಸೃಷ್ಟಿಯೇ, ನೀನು ನನಗೆಷ್ಟು ಸ್ವಂತ? ನನ್ನೀ ಜೀವನದುದ್ದೇಶವೇನು? ನನ್ನ ಅಂತರಾಳಕ್ಕೆ ಉಸಿರನ್ನು ಕೊಡುವವರು ನನಗೆ ದೊರಕುವವರೆಗೂ ನಾನು ನಿನ್ನನ್ನು ಅರಿಯಬಯಸುವೆನು. ನೀನು ನನಗೊಂದೇ ಜೀವನವನ್ನು ನೀಡಿದ್ದರೂ ನಾನು ನನಗೆ ಹಲವಾರು ಜೀವನವನ್ನು ನೀಡಿರುವೆನು. ಆದರೆ ಇಂದು ನನ್ನಂತರ್ಮುಖಿಯನ್ನಂತ್ಯಗೊಳಿಸಿ, ನಿನ್ನನ್ನು ನಿನ್ನ ದೃಷ್ಟಿಯಿಂದಲೇ ನೋಡಿ ತಿಳಿಯಬಯಸುವೆನು ನಾನು. ನೀನೂ ಅಮರಳಲ್ಲ, ನಾನೂ ಅಮರನಲ್ಲ. ಅನಂತತೆಯಲಿ ನಮ್ಮಿಬ್ಬರಿಗೂ ಅಸ್ತಿತ್ವವಿಲ್ಲ. ಅನಂತತೆಗೆ ಅರ್ಥವೆಂಬುದಿಲ್ಲ!

ನನ್ನ ಹೊರಗೆ ನನ್ನವರನು ಹುಡುಕಿ ನಿನ್ನೆಯವರೆಗೆ
ನನ್ನೊಳಗೆ ನಾನಿಂದು ಅರಿತೆನು ನಾನೊಬ್ಬನೆ ನನಗಿನ್ನು
ನವ ವಿಚಾರಗಳ ನವ ಜ್ಞಾನಗಂಗೆಯು ನನ್ನೊಳಗೆ
ನನ್ನನೇ ಗೆಲ್ಲಿಸಿ ಹರಿದು ಸೇರಿತು ನನ್ನಂತರಾತ್ಮವನು

ನಾನಡಗಿರುವೆನಿಂದು ನನ್ನೆದೆಯ ಕೊನೆಯ ದನಿಯಲಿ
ನನ್ನ ಕಾಲವನ್ನೆಲ್ಲಾ ಕಳೆದು, ಮರೀಚಿಕೆಯಲಿ ಮಿಂದು
ಅಂತರ್ಮುಖಿಯು ಸತ್ಯ ಅಸತ್ಯಗಳಾಚೆ ಮರೆಯಾಗಲಿ
ಉಸಿರಿರಲಿ, ಹೆಸರಿರಲಿ, ಅಂತಿಮಾನಂದವನರಿಯಲಂದು

ನಾನಿನ್ನು ನನ್ನವನಲ್ಲ, ನಾನು ಅವಳದಂತೂ ಎಂದೆಂದಿಗೂ ಅಲ್ಲ
ಮರೀಚಿಕೆಯೇ ನಿಜ ನನ್ನದೆಂಬುದೆಲ್ಲ, ಅನಂತತೆಯಲಸ್ತಿತ್ವವೆಂಬುದಿಲ್ಲ

Friday, June 12, 2009

ಒಲವಿನ ಪರಿಮಳ

ಎರಡು ದಿನಗಳ ಜೀವನ, ಕೆಲ ಕ್ಷಣ ಒಂಟಿ ಪಯಣ, ಕೆಲ ಕ್ಷಣ ಎರಡು ಹೃದಯಗಳ ಮಿಲನ. ನಿನ್ನ ನೆನಪಲಿ ಬಡಿದ ಪ್ರತಿಯೊಂದು ಎದೆಬಡಿತವು ಮೂಡಿಸಿತು ಶಾಂತ ಆಗಸದಲಿ ವಿರಹದ ಅಲೆಗಳನು. ಆ ಅಲೆಗಳ ಆರ್ಭಟಕೆ ಅಸ್ತವಾಗುತಿರುವ ಸೂರ್ಯನು ಚದುರಿ ಕಣ್ಮರೆಯಾಗುತಿಹನು ಭುವಿಯೊಳು. ಕೆಂಪು ಆಗಸದ ಮೇಲೆ ತಂಗಾಳಿ ಕರೆತಂದ ಆ ಚಂದಿರನ ಸೌಂದರ್ಯದಲಡಗಿರುವ ನಿನ್ನಾತ್ಮಕೆ ಈ ಪದಗಳಿಂದ ನನ್ನುಸಿರನು ಕೊಡಬಯಸುವೆನು....

ಮುಸ್ಸಂಜೆಯ ಮಳೆಹನಿಗಳು ಕೊಡುವ ವಿಸ್ಮಯ ಸ್ಪರುಷ
ಮನದಲಿ ನಿನ್ನನೇ ನೆನಪಿಸಿ ಚಿಮ್ಮಿಸಿದೆ ನವಿರಾದ ಹರುಷ
ಈಗಲೋ ಆಗಲೋ ನಿನ್ನನೇ ನೋಡುವ, ಸೇರುವ ತವಕ
ಮಿಂಚಿಗೆ ರಾತ್ರಿ ಹಗಲಾಗುವ ಹಾಗೆ ನಿನ್ನ ಮಾಯೆ ಮೋಹಕ

ಒಲವಿಗೆ ಒರಗಿಂದು ನಾನು ಕಲೆಗೂ ಕೃತಿಗೂ ಮೀರಿದ
ಜೀವನವನು ಹೆಣೆಯುತ ಸೇರಿಹೆನು ಗೂಡನು ದೂರ ತೀರದ
ಹಗಲಿರುಳು ಪ್ರತಿ ಉಸಿರು ನಿನ್ನ ಹೆಸರನೇ ಹೇಳುತ
ಕಲ್ಪನೆಗೂ ಮೀರಿ ನಡೆದೆನು, ಬೆಳೆದೆನು ನಿನಗೆ ಸೋಲುತ

ಮೌನವನು, ಮಾತುಗಳನು ಮೀರಿದ ನಮ್ಮ ಮನಸುಗಳು
ಬದುಕಿಗರ್ಥವನು ನೀಡಿ ಮುಳುಗಿವೆ ಅನಂತ ಆನಂದದೊಳು
ಉದಯಾಸ್ತಗಳು ಪ್ರತಿದಿನವೂ; ಈ ನಡುವೆ ಯಾರದು ಗೆಲುವು?
ನಿನ್ನೆ ಅರಳಿದ ಹೂವುಗಳು ನಾವು, ನಮ್ಮ ಪರಿಮಳವೇ ಒಲವು!

Tuesday, January 27, 2009

ನಿರಂತರ ಪ್ರೀತಿ

ನೀ ನೋಡುವ ನೋಟ ಸುಂದರ, ನಿನ್ನ ನಯನಗಳೇ ಮನೋಹರ
ನೀ ಹೇಳುವರ್ಥವು ಶೃಂಗಾರ, ನಿನ್ನ ಮನಸೇ ಸರೋವರ
ಇರುಳಲಿ ಧರತಿಗೆ ನಿನ್ನ ಮೋಹಕ ನಗುವೇ ಅಲಂಕಾರ
ಜೀವನದಲಿ ನೀನು ಹರಿಸುವ ಸ್ನೇಹದ ಕ್ಷಣಗಳೇ ಸುಮಧುರ

ಹಸಿರು ವರ್ಣದ ವನದಲಿ, ವಿಸ್ಮಯ ಶ್ವೇತಪುಷ್ಪಗಳ ಸಾಲಲಿ,
ಸೃಷ್ಟಿಯಾದ ಸೌಂದರ್ಯ ಶೋಭಿಸುತಿಹುದು ನಿನ್ನ ಮುಖದಲಿ
ಮುಗಿಲ ಮೋಡಗಳು ಮನಸಿಗೆ ಹಂಸದಂತೆ ಭಾಸವಾಗುವ ಸಂಜೆಯಲಿ,
ಕಾಣುವ ಸುಂದರ ಸೂರ್ಯಾಸ್ತ, ಬೆರೆತಿಹುದು ನಿನ್ನ ಬದುಕಿನ ಪ್ರತಿಕ್ಷಣದಲಿ

ಸೃಷ್ಟಿಯು ಬಿಡಿಸಿದ ಚಿತ್ರದಲಿ, ಸೌಂದರ್ಯವೇ ನನ್ನುಸಿರಾದಂತಹ ಸ್ಥಳದಲಿ,
ಮರುಧ್ವನಿಯ ಮಾಧುರ್ಯವನು ಸವಿದೆನು, ನಿನ್ನ ಹೆಸರನು ಮನಸಾರೆ ಕೂಗಿ
ನಿನ್ನ ಮನಸಿನ ಧ್ವನಿಯಲಿ ನನ್ನುಸಿರಿನ ಸ್ವರವಿರಲು, ಆ ಅತಲ ಪಾತಾಳದಲಿ
ಅಡಗಿದ್ದರೂ ಅರಸಿಬರುವೆನು ನನ್ನ ಜೀವನವನೇ ನಿನಗರ್ಪಿಸಲು ಪ್ರೀತಿಗಾಗಿ

ಸಮಯದ ಸುಳಿಗೆ ಸಿಗದೇ ಸೇರುವೆನು ನಿನ್ನನು, ನಿನ್ನ ಪ್ರೇಮಸಿಂಧುವಾಗಿ,
ಪಾರಿಜಾತ ವನದಲಿ ಚಿಮ್ಮುವ ಪನ್ನೀರಿನ ಸೇಲೆಯಂತಹ ನಿನ್ನ ಸ್ನೇಹಕೆ,
ಸೋತು ಬಯಸಿದೆನು ನಿನ್ನ ಸನಿಹವನು, ಚುಂಬಿಸುವೆನು ಇಂಚರವಾಗಿ
ನಿನ್ನಯ ಹೃದಯ ಬಡಿತಗಳನು, ನಿರಂತರವಲ್ಲವೀ ನಮ್ಮ ಪ್ರೀತಿಯ ಬೆಸುಗೆ?