Friday, November 21, 2008

ಕೊನೆಯ ಉಡುಗೊರೆ

ನೀನರಿಯೆಯಾ ನನ್ನ, ಹೊಂಬಿಸಿಲಲಿ ಹೊಳೆವ ಹವಳದಂತಾ ನನ್ನ ಕಣ್ಣ?
ಹಸಿದ ಹೊಟ್ಟೆಯಲೂ ನಿನ್ನ ಕನಸನೇ ಕಂಡ ಹೂವಿನಂತಾ ನನ್ನ ಮನಸ್ನ?
ಹರಿದು ಹೋದಿ ಮತ್ಯಾಕ ನನ್ಮನದೊಳಗ ಹೊಳೆಹಾಂಗ, ಹನಿಯೊಂದನುಣಲೂ ಕೊಡದ?
ಬನವೆಲ್ಲ ಬರಿದಾಗಿ ಬರಡಾತು ಭೂಮಿ, ಬಾಡಿಹೋತು ಬದುಕು ನೀನಿಲ್ದ

ಕೊನೆವರೆಗೂ ನಿನ್ನ ಬಯಸಿದ ಮನಸು, ಕಗ್ಗತ್ತಲಲೂ ನಿನ್ನನೆ ಕಲ್ಪಿಸುವಂತಾ ಹುಚ್ಚು ವಯಸು
ಬೆಳಗಾತು, ಬಾಗಿಲಲಿ ಕಾದು ಕಾದು ನಿನ್ನ ಹಾದಿ, ಜೀವಾನ ಗಟ್ಟಿ ಹಿಡಿತ
ತೋರಣಾನ ಮುತ್ತಿದ ಇಬ್ಬನಿ, ಕರಗಿ ಕಚ್ಚಿತು ನನ್ನ ಕಣ್ಣ ರೆಪ್ಪಿನ
ತಂಪು ಕಣ್ಣುಗಳನಾವರಿಸಿ ತಂತು ಹಿತವಾದ ಹರೆಯದ ನೆನಪುಗಳನ
ಸಾಕಿಂತಾ ಜೀವನ, ಪ್ರೀತಿಯಿಲ್ಲದ ಪಯಣ, ನಾ ಕೊಲ್ಲಬಲ್ಲೆನಾ ಈ ನೆನಪುಗಳನ?
ಯಾವಾಗ ಬರುವಿ ಹೇಳು ನಮ್ಮನಿಗ, ನಿನ್ನ ಪೂಜಿಸುವ ಗುಡಿಗ, ನಾ ಸಾಯುವ ಮೊದಲು
ನನ್ನಾತ್ಮಾನ ಸುಟ್ಟು ಹಚ್ಚತೀನಿ ದೀಪ, ನನ್ನ ಕೊನೆಯುಸಿರ್ನ ನಿನಗುಡುಗರೆಯಾಗಿ ಕೊಡಲು

Wednesday, November 12, 2008

ಮೌನ ನೆನಪು

ಇದು ನಿನಗಾಗಿ ಬರೆದ ನನ್ನ ಮೌನ ಮನಸಿನ ಮಧುರ ಸಂದೇಶ
ಹೂಮುಡಿದ ಪದಗಳ ಜೋಡಿಸಿ ನೀಡುವೆ ನಿನ್ಮನಕೆ ನೂತನ ಸ್ಪರುಷ
ನಿನ್ನಯ ಸಂಜೀವಿನಿ ಸ್ನೇಹಕೆ ಸೋತು ಹರಿಸುವೆ ಹಿತವಾದ ಹರುಷ
ಈ ದಿನಕಾಗಿ ಕಾದು ಕೊಡುವೆ ಪೂರ್ಣಿಮೆ ಪರಿಮಳವ ಪ್ರತಿ ವರುಷ

ಹಾರಿ ಹಾರಿ ಹಿಡಿಯಹೋದೆ, ನಿನಗಾಗಿ ಹಸಿರು ಹಕ್ಕಿಯೊಂದನು
ಭುವಿಬಾನುಗಳು ಬರಿದಾದರೂ ಬಿಡನೆನ್ನಚಲ ಹಠವನು
ಬೆಳಕು ಬಾಡಿ ಇರುಳರಳುವುದರಲಿ ಹಿಡಿದದಕೆ ನಿನ್ನ ಹೆಸರಿಟ್ಟೆನು
ಅದರ ಹಾಡಿಗೆನ್ನೆದೆಬಡಿತವ ಪೋಣಿಸಿ ಸಂಗೀತದುಡುಗರೆಯ ಕೊಡುವೆನು

ಮನಸಲೇ ಮನೆಯ ಬೆಳೆಸುವೆನು ಸವಿಯುತ ಸಾಗರದ ಸೌಂದರ್ಯವನು
ಉಸಿರಿನ ಬಿಸಿಯನೇ ಬಳಸುವೆನು, ಬೆಳಗಲು ಭಾವನೆಯೆ ಬಾಗಿಲನು
ನೇಸರನ ಕಿರಣಗಳನೇ ಉಂಡು, ಇರುಳಿಡೀ ಮನೆಗೆ ದೀವಿಗೆಯಾಗುವೆನು
ನೇಹದ ಸ್ಪರುಷವನ್ನೀಡುವ ಗೋಡೆಗಳನು, ನಿನ್ನಯ ನೆನಪುಗಳಿಂದಲಂಕರಿಸುವೆನು

ಹಸಿವನೇ ಕೊಂದು ಹೊತ್ತು ತರುವೆನು ನಿನಗಾಗಿ, ಪ್ರೀತಿಯ ಪಲ್ಲಕ್ಕಿಯಲಿ ಪ್ರೇಮದಮೃತವ
ಪ್ರಾಣವನೇ ಪಣತೊಟ್ಟು ಕೊಡುವೆನು ನಿನಗೆ ಪ್ರತಿಚಣವೂ ಹೊಸಜನುಮದನುಭವವ
ಈ ದಿನವೂ ನಿನ್ನ ಪ್ರತಿದಿನದ ದನಿಯಾಗಲಿ, ಕೊಡಲಿ ಸ್ವರ ರಾಗಗಳು ನಿನಗೆ ನಿರ್ಮಲ ರೂಪವ
ಮೌನದನಂತತೆಯು ನಿರಂತರವಾಗಿರಲಿ, ನೀಡಲಿ ಸಮಯವು ನಿನಗೆ ಸತ್ಯಸ್ವರೂಪವ

ಮುರಿದ ಮನಗಳು

ಅರುಣೋದಯ ಕಾಣದೆ, ಮೋಡಗಳನೂ ಹೊರದೆ, ಆಗಸ ಮಳೆಗರೆಯಿತು
ಮನಸಿನ ನೋವುಗಳು ಅಪ್ಪು ಅಳಿದವಂದು, ಮಳೆಯ ಬಾಣಗಳನು
ಮಲಗಿ ಮಲಗಿಯೂ ನಿದ್ದೆ ಹೋಗದ ಹಗುರ ಮನಸು, ಸವಿಯಿತು
ಏನೋ ಕಳೆದುಕೊಂಡು ಏನೋ ಪಡೆದುಕೊಂಡತಹ ಸೊಗಸನು

ಮಧುರ ಮೌನದ ಮೇರೆಯಲಿ, ನೀಡಿದೆ ಊಹೆಗೆ ನಿಲುಕದ ಜೀವನವ
ನಿನಗೆ ಧಾರೆಯೆರೆದ ಪ್ರೀತಿ ಭ್ರಮೆಯೆಂದು ನಾ ಹೇಗೆ ನಂಬಲಿ?
ನಿರ್ಮಲ ನೀಲಿ ಬಾನಲಿ ಚಲಿಸುವ ಶಾಂತ ಚಣಗಳ ರೂಪದಂತಿರುವ
ನಿನ್ನಯ ನಿಸ್ವಾರ್ಥ ನೇಹದುಸಿರನು ನಿಷ್ಕರುಣೆಯಿಂದ ನಾನೇಕೆ ಕೊಲ್ಲಲಿ?

ಪಯಣಿಸುತಿದ್ದೆ ದೋಣಿಯಲಿ, ತೆವಳುವ ತೆರೆಗಳ ದಿಕ್ಕಿನಲ್ಲಿ
ಹಾರಿತು ದೋಣಿ ದಿಗಂತಕೆ, ಬೀಸುವ ಬಿರುಗಾಳಿಯನುಟ್ಟು
ಮುಳುಗಲಾಗದೆ, ಈಜೂಬಾರದೆ, ಬದುಕನರಿಸಿದೆ ಬಂಡೆಯಾಸರೆಯಲಿ
ತೇಲುವೆಯಾ, ಓ ಬಂಡೆಯೇ ದೂರತೀರಕೆ, ಸ್ನೇಹಕಿರೀಟವ ತೊಟ್ಟು?

ಹೃದಯದಲಡಗಿರುವ ಹೂವೇ....

ಅದೊಂದು ಸುಂದರ ಸಂಜೆ, ಹೂದೋಟದಲಿ ಯಾರದೋ ವಿಚಾರದಲಿ ಮುಳುಗಿದ್ದೆ. ಚಿಟ್ಟೆಯೊಂದು ಹಾರುತ್ತ ಹಾರುತ್ತ, ಎಲ್ಲ ಹೂಗಳನ್ನು ಬಿಟ್ಟು ಕೊನೆಗೆ ಕುಳಿತುಕೊಂಡಿತು, ಎನ್ನೆದೆಯಮೇಲೆ.
ಅದಾವ ಹೂವು ಎನ್ನ ಹೃದಯದಲ್ಲಡಗಿದೆಯೋ ಎನಗೆ ತಿಳಿಯದು. ಆದರೆ ಅದರ ಸುವಾಸನೆಯೇ ಮುಂದಿನ ಪುಟದಲ್ಲಿ ಕೆಲವು ಸಾಲುಗಳನ್ನು ಬರೆಯಲು ಸ್ಫೂರ್ತಿ ನೀಡಿತು.
ಹೂವು ಏನೇ ಆದರು, ಎಲ್ಲಿಗೆ ಹೋದರೂ ನನಗೆ ಭಯವಿಲ್ಲ. ಏಕೆಂದರೆ ಅದರ ಸುವಾಸನೆ ನನ್ನ ಮನದಲ್ಲಿ ಶಾಶ್ವತವಾಗಿ ನೆಲಸಿಬಿಟ್ಟಿದೆ.

ಸಂಜೆ ಸೂಸುತಿದೆ ಸಂಭ್ರಮದಲಿ ಕೆಂದಾವರೆಯ ಕಂಪು
ಕಣ್ಮುಚ್ಚಿ ನೆನೆಯಲು, ಮನಸಿಗೆ ನಿನ್ನ ನಗುಮೊಗದ ತಂಪು
ಘೋರ ಗರ್ಭವೊಡೆದು ಚಿಮ್ಮಿತು ನಿನ್ನೊಲುಮೆಯ ಬುಗ್ಗೆಯಿಂದು
ಮೌನದ ಮಾಯೆಯಲಿ ಕರಗಿ ನಾನಾಗಿರುವೆ ಕುಂಕುಮದ ಬಿಂದು

ಹೊತ್ತು ನಡೆಯುತಿರುವೆನು ಇರುಳಲಿ, ಹೊರಲಾಗದ ಕೊರಗಿನ ಹೊತ್ತಿಗೆಯ
ಬಿಕ್ಕು ಬಿತ್ತುತಿರುವೆನು ನಿನ್ನಲಿ, ಮರೆಯಲಾಗದೆ ಆ ಕ್ಷಣಗಳ ಚುಂಬನವ
ಎತ್ತ ನಡೆದರೂ ಜಡಿ ಮಳೆಯಲಿ, ಕೊನೆಯಿಲ್ಲದ ಭಾವನೆಗಳ ಸ್ಪರುಷವ
ಕಂಡು ನೇಸರನು ಕಟ್ಟಿದನು ನಮ್ಮನಗಳ ನಡುವೆ ಸಪ್ತವರ್ಣಗಳ ಸೇತುವೆಯ

ಎಷ್ಟು ತಡೆದರೂ ನನ್ನ, ತಾಳಲಾರೆ ನೀನಿಲ್ಲದ ಕ್ಷಣಗಳನ್ನ
ಕಣ್ಣು ಕಂಡಿತು ತನ್ನ, ಮಾಯದೆ ಮರೆಯಾಗಿರುವ ಗಾಯಗಳನ್ನ
ಮಾತು ಉಸಿರನು ಮುತ್ತಿ, ಸೇರಿದೆ ನಿನ್ನ ಮನಸಿನ ಮೌನವನ್ನ
ನೋಟ ತುಟಿಗಳನು ಕಚ್ಚಿ, ಸುರಿಸಿದೆ ಬೆಳದಿಂಗಳ ಬೆವರನ್ನ

ಮೆಲ್ಲ ಮೆಲ್ಲನೆ ಬದುಕಲಿ, ಬೆರೆಸುತಿರುವೆ ಸುಮಧುರ ಸುಧೆಯನು
ಸ್ನೇಹರೇಖೆ ಅಳಿಯದಿರಲಿ, ಕೈಬಿಡೆನು ಕೊಡಲೇ ಜೀವ ಸಾಕ್ಷಿಯನು?
ಅರ್ಥವೇ ಆಗದ ಬದುಕಲಿ, ಹೊಸಬದುಕನು ನೀನು ರೂಪಿಸಿದೆ ನಂಬುವಿಯೇನು?
ಭರವಸೆ ಭಾವನೆಯಲರಳಲಿ, ನಾನಾಗುವೆನಂದು ಎಂದೆಂದಿಗೂ ನಿನ್ನವನು!

ತಾಯಿ ಬರಿದ ಕವಿತೆ

ಓ ಮುಗ್ಧ ಮಗುವೇ, ಆಹಾ ನಿನ್ನ ಈ ನಗುವೇ
ನಿನ್ನ ಸನಿಹಡಿಂದ ನನಗೆ ವರುಷವೆಲ್ಲಾ ಹರುಷವೇ
ಕನಸಲ್ಲೇ ಕೆಟ್ಟಿದೆ ನವಮಾಸ ಪೂರ್ತಿ, ನಿನ್ನ ಮನಸನು
ಉಸಿರನ್ನೇ ತಡೆದು ನಿನಗಿರಿಸಿದೆ ಹೆಸರನು

ಮನಸಿನಂಗಳಕೆ ಕರೆತರುವೆ ಬೆಳದಿಂಗಳೂಟಕೆ
ನಿನ್ನ ನಗೆಯ ನೆನಪಿನಲ್ಲಿ ಜಗವೆಲ್ಲ ಮರೀಚಿಕೆ
ಹಸಿವೆಯಿಂದ ಹಾಡಲು ಹೃದಯದಿಂದ ಕುಡಿಸುವೆನು
ನನ್ನ ಜಗವನ್ನೇ ಮರೆತು ನಿನ್ನೊಂದಿಗೆ ಕುಣಿವೆನು

ನನ್ನ ಪ್ರೀತಿಯ ಕಡಲಲ್ಲಿ ಸೂರ್ಯೋದಯ ನೀನೇ
ನನ್ನ ಮಮತೆಯ ಮಡಿಲಲ್ಲಿ ನಿತ್ಯಾನಂದವು ನಿನಗೆ
ನನ್ನ ನಾಳೆಗಳ ಬದುಕಿಗೆ ನಿನ್ನುಸಿರೇ ಬೆಳಕು
ನನ್ನ ಜೀವನದ ಕವಿತೆಗೆ ನಿನ್ನೊಲವೇ ಸ್ಫೂರ್ತಿಯು

ನನ್ನವನು

ಕಂಪನ ಹೃದಯದಂಚಿನಲಿ, ಕೂಗಿತು ಮನಸಿನ ಮೌನವನು
ಸಿಂಚನ ಪ್ರೇಮದುಸಿರಿನಲಿ, ಮಿಡಿಸಿತು ಸೊಗಸಿನ ತನುವನು
ತುಟಿಗಳು ತಂಪಿನಲಿ ತಟ್ಟಿದವು ಇನಿಯನುಸಿರ ಸ್ವರಗಳನು
ಮನಗಳು ಮಿಲನದಲಿ ಮುಟ್ಟಿದವು ಮುಗಿಲ ಮೇಘಗಳನು

ಕತ್ತಲು ಕವಿದ ಗವಿಯಲಿ, ಮನಸ ನೆಚ್ಚಿನ ಜೊತೆಯಲಿ
ಅಲೆಗಳ ಆಟದ ಅಡಿಯಲಿ, ತನುವನು ಸವಿದ ಸ್ನೇಹದಲಿ
ಹಾಡುವೆನು ಮನಸು ಬರೆದ ಪ್ರೇಮಗೀತೆಗಳ ಸಾಲುಗಳಲಿ
ಕಂಡೆನು ನನ್ನನು ಇನಿಯನ ಹೃದಯದ ಪ್ರೇಮಗೂಡಿನಲಿ

ಪ್ರೀತಿಯ ಚುಂಬನ, ಸವಿದಾಲಿಂಗನ, ಹೃದಯವೇ ಹಾರುತಿದೆ
ಪ್ರಣಯದ ಪ್ರಳಯ ವಸಂತದುಸಿರಿನ ಹೆಸರೇ ಹೇಳುತಿದೆ
ನಿನ್ನ ಮನಸಿನ ಜೊತೆ ಪ್ರತಿ ಪ್ರತಿ ಕ್ಷಣ ನನ್ನ ಮನಸಿನ ಅರ್ಪಣ
ನನ್ನ ಭಾವನೆಗಳಿಗೆ ನಿನ್ನ ಪ್ರೀತಿಯ ಬೆಸುಗೆ ಆಹಾ ಎಂಥ ಸುಂದರ ಸಂಗಮ

ನೀನೆ ನನ್ನ ನಾಳೆಗಳ ಬದುಕನು ಬೆಳಗುವೆಯಾ?
ನನ್ನ ಪ್ರೀತಿ ಕೇಳುವುದೆಲ್ಲ ಹರುಷದಿ ಹರಸುವೆಯಾ?
ಸದಾ ನಿನ್ನ ಸ್ನೇಹದಲಿ ಈ ಕವಿತೆಯ ಹಾಡುವೆನು
ಗೆಳೆಯಾ, ನಮ್ಮ ಮನಗಳಿಂದ ಈ ಜಗದ ಮನವ ಗೆಲ್ಲುವೆನು

ನನ್ನವಳು

ಕಣ್ಣಲ್ಲೇ ಕಂಡೆ ಒಂದು ಕವಿತೆಯ ಕನಸನ್ನು
ಕಣ್ಣಿನಂಚಲ್ಲೇ ಹರಿದು ಬಂದ ಪ್ರೀತಿಯ ಮನಸನ್ನು
ಚುಂಬನದ ಕಂಪಿನಲಿ ಚುಂಬಿಸಿದೆ ಚೆಲುವೆಯನು
ಅಣುವಲ್ಲಿ ತನುವಲ್ಲಿ ಸವಿದೆ ಪ್ರೀತಿಯ ಸೊಬಗನ್ನು

ಉಸಿರಿನಲೇ ಹೆಸರಿರಲು ಮೌನದಲೇ ಮನಸರಿವೆ
ತುಟಿಗಳಲೇ ತಂಪಿರಲು ಮನವನ್ನೇ ಮುತ್ತಿಡುವೆ
ನೆರಳಲೇ ನೆನೆಯಿರಲು ನದಿಯಂತೆ ಹರಿಯುತಿಹೆ
ಪ್ರೀತಿಯೇ ಪ್ರೀತಿಸಲು ತನುವನ್ನೇ ಮರೆತಿಹೆ

ನಿನ್ನ ನಗೆಯ ನೇಹದಲಿ ಮನವ ಮೀಟುವೆ
ಮಿಡಿವ ಮನದ ಮೇರೆಯಲಿ ಬದುಕ ಬರೆಯುವೆ
ಕುಣಿವ ಕನಸ ಮನಸಲಿ ಕಣ್ಣ ಕಾಣುವೆ
ಆ ಕಣ್ಣ ಕನಸಿನ ಕನ್ನಡಿಯಲಿ ನಿನ್ನ ಕರೆತರುವೆ

ಕವಿತೆಗಳು ಕವಿದಿರಲು ಕನಸುಗಳು ಕರಗಿರಲು
ಮನಸುಗಳು ಮಿಲನದಲಿ ಮೌನವನು ಮೀರಿಸಲು
ಕನಸ ಕಟ್ಟುವೆನು ಕನಸಲಿ ಕನಸ ಕಟ್ಟುವೆನು
ಕನಸ ಕಟ್ಟುವೆನು ಕನಸಲಿ ಕನಸ ಕಟ್ಟುವೆನು

ಕಲ್ಪನೆ

ಈ ಕಣ್ಣು ಕಾಣುವ ಕನಸಿನಲ್ಲಿ ಸುಂದರ ಕನಸು
ಆ ಕನಸು ಕಂಡ ಮನಸಿನಲ್ಲಿ ಮೊಗವ ಕಲ್ಪಿಸು
ಮೊಗದ ಮಾತಿನ ಭಾವದಲ್ಲಿ ಪ್ರೀತಿಯ ಬಿಂಬಿಸು
ಕನಸ ಕಲ್ಪನೆಯ ಕೊನೆಯಲ್ಲಿ ಹೃದಯವ ಗುರುತಿಸು

ಬಿಂಬದ ಪ್ರತಿಬಿಂಬದಲಿ ಹಾಡು ಮನಸಿನ ಕವಿತೆಯನು
ಮನಸಿನ ಭಾವನೆಗೆ ಕಳುಹಿಸು ಕನಸಿನ ಓಲೆಯನು
ಭಾವದ ಭಾವನೆಯಲಿ ಬೆಳೆಸು ಪ್ರೀತಿಯ ಲತೆಯನು
ಹೂವಿನ ಹೃದಯದಲಿ ಹರಿಸು ಹರುಷದ ಭಾಷ್ಪವನು

ನೋಟದಂಚಿನಲಿ ನೋಡು ನಲಿವ ನಿಮಿಶವ
ನಿಮಿಷದುಸಿರಲಿ, ನೋವಿನರಿಯಲಿ, ಮಿಡಿಸು ಜೀವನ ರಾಗವ
ಹೃದಯದ ಹಾದಿಯಿಂದ ಮೀರಿಸು ಕಣ್ಣಿನ ಕಲ್ಪನೆಯ
ಕಲ್ಪನೆಯ ಕವನದಿಂದ ಪ್ರೀತಿಸು ಕನಸಿನ ಜೀವನವ

ಅರಳಿತು ಹೃದಯ ಅರುಣನ ಹಾಗೆ ಅಂಬುವಿನಂಚಿಂದ
ಚಿಮ್ಮಿತು ಪ್ರೀತಿ, ಪ್ರಳಯದ ಭೀತಿ, ಪ್ರಣಯದೊಳಗಿಂದ
ಹರಡಿತು ಹರುಷ, ಮನಸಿನ ಸ್ಪರುಷ, ಕನಸಿನ ಕಣ್ಣಿಂದ
ಮೂಡಿತು ಮನವು, ನಿರ್ಮಲ ತನುವು ಹೃದಯದ ಹೆಣ್ಣಿಂದ

ಅಮ್ಮ ಅಮ್ಮ

ನಾ ಕಂಡ ಭುವಿಯ ಮಹದೇಕ ದೇವತೆ
ನಾ ನುಡಿವ ಪದವ ಕಲಿಸಿದ ಗುರುಮಾತೆ
ಮೂರುಜನುಮಗಳ ಮಧುರ ಅನುಭವಗಳ ವನಿತೆ
ನಾ ಬರೆಯುವೆ ನಿನಗಾಗಿ ಈ ಸವಿ ಕವಿತೆ

ಜೇನುಗೂಡಲಿ ಕೈ ಹಾಕಿ ತಿನಿಸಿದೆನಗೆ ಸವಿಜೇನನು
ಜ್ಞಾನ ಸಾಗರದ ದೇವಿಯೇ ನೀಡಿದೆನಗೆ ಸುಜ್ಞಾನವನು
ಜೀವಸಾಗರದಲಿ ಈಜಿ ಮುತ್ತಿಸಿದೆನ್ನ ದಡವನು
ಹೇಗೆ ತೀರಿಸಲಿ ನಿನ್ನ ಮೂರು ಜನುಮಗಳ ಋಣವನು?

ಮಮತೆಯ ಮಾನಿಕ್ಯಕ್ಕೆ ಕರಗುತಿದೆ ವಜ್ರವು
ತ್ಯಾಗದ ತೇರಿಗೆ ನಮಿಸುತಿಹನು ದೇವರು
ಕರುಣೆಯ ಕಾರಂಜಿಯಲಿ ಬದುಕುತಿಹುದು ಜಗವು
ಶಾಂತಿ ಸಹನೆಯ ದೇವತೆಗೆ ಕೈಮುಗಿವೆನು ನಾನು

ಕಳೆಯುತಿಹೆನು ಕ್ಷಣಕ್ಷಣವನು ಜೀವದಾತೆಯ ಉಸಿರಲಿ
ಮಲಗುತಿಹೇನು ದಿನದಿನವು ನಿನ್ನ ಮಾಮತೆಯ ಮಡಿಲಲಿ
ಪೂಜಿಸುತಿಹೇನು ನಿನ್ನ ಪರಿಶುದ್ಧವಾದ ಎನ್ನ ಮನದಲಿ
ಧ್ಯನಿಸುತಿಹೇನು ನಿನ್ನ ನಿರ್ವಿಕಾರ ಎನ್ನಂತರಾತ್ಮದಲಿ

ಹಸಿದ ಹುಡುಗನ ಹಸಿವಿನ ಆಳ ನಿನ್ನ ಪ್ರೀತಿ
ಹಬ್ಬಿದ ಬಿಲ್ಲಿನ ಬಣ್ಣದ ಮಾತು ನಿನ್ನ ಕೀರ್ತಿ
ಬ್ರಹ್ಮನು ಬರೆದ ಸೃಷ್ಟಿಯ ಹಾಡು ನಿನ್ನ ನೀತಿ
ನಾನು ಕೆತ್ತಿದ ಮಮತೆಯ ಹೂವೆ ನಿನ್ನ ಮೂರ್ತಿ

ಹಕ್ಕಿಯು ತೇಲುತಿದೆ ಸಂತಸದಾಗಸದಲಿ
ದುಂಬಿಯು ಹಾರುತಿದೆ ಹಾಡುವ ಹೂವಿನಲಿ
ಕಿರಣವು ಮಿಂಚುತಿದೆ ಅಲೆಗಳ ಆಸೆಯಲಿ
ನಾನು ಬದುಕುತಿರುವುದು ನಿನ್ನ ಹೃದಯದ ಜೀವದಲಿ

ಅಳುವ ಕಂದನ ಕರುಳಿನ ಕೂಗು ಅಮ್ಮ ಅಮ್ಮ
ನಲಿವ ನವಿಲಿನ ನಾದದ ನಾಮ ಅಮ್ಮ ಅಮ್ಮ
ಅರಳುವ ಹೂವಿನ ಹರ್ಷದ ಹಾಡು ಅಮ್ಮ ಅಮ್ಮ
ನನ್ನ ಉಸಿರಿನ ಹೃದಯದ ಜೀವ ಅಮ್ಮ ಅಮ್ಮ

ಸೃಷ್ಟಿ

ಮುಗಿಲಿನ ಒಡಲಲಿ ಅರಳುವ ಹೂವೆ
ಧರೆಯ ಹಸಿರಲಿ ಕುಣಿಯುವ ನವಿಲೇ
ನಿಮ್ಮೀ ಹರುಷಕೆ ಕಾರಣ, ನಿಮ್ಮೀ ಪ್ರೇಮದ ಕವನ
ನೀ ಹೇಳು ಹಾರುವ ಹರಿಣ, ನೀ ಹಾಡು ಸತ್ಯದ ಕಿರಣ

ಹಸಿರಲಿ ಹರಿದು ಬರುವ ಹರಿವ ನೀರಿನ ಹಾಡು
ನೋವಿನ ನಗೆಯಲಿ ಅಳಿವ ದುಂಬಿಯ ಹಾರುವ ಹರುಷ
ಸೊಬಗಿನ ಸಿರಿಯ ನಡುವೆ ಸಾಗುವ ಸರ್ಪದ ಸರಸ
ನೀ ಕೇಳು ಭುವಿಯ ಭಯವೇ, ನೀನರಿಯೆ ಮನುಜನ ಮನವೇ

ಆ ಸೂರ್ಯನ ಉದಯವ ಕಂಡು, ಈ ಭುವಿಯ ಹರುಷವ ನೋಡು
ಆ ಸಾಗರದಾಚೆ ಸುಳಿವ ಆ ಅಲೆಗಳ ಆಟವ ನೋಡು
ಈ ನೈಜ ಸುಖವ ಕಂಡು ನೀ ನಾಚು ಮನುಜನ ಮನವೇ
ಈ ನೈಜ ಸುಖವ ಕಂಡು ನೀ ನಾಚು ಮನುಜನ ಮನವೇ

ಕಾಲದ ಕದಲ್ಲಿ ನಡೆವ ಪ್ರೇಮದ ಪಯಣ, ಅದರ ದಡದಲಿ ಶಯನ
ಶಯನದ ಕನಸಲಿ, ಆಸೆಯಾಗಸದಲಿ, ಹೃದಯಗಳ ಮಿಲನ
ಶಶಿಯ ನಗೆಯಲಿ, ಮಿಂಚುವ ಚುಕ್ಕೆಗಳಲಿ, ಮುಳುಗುವ ಮಾನವ
ನೀ ಬಣ್ಣಿಸು ಸೃಷ್ಟಿಯ ಹೃದಯವೇ, ನೀ ಬಣ್ಣಿಸು ಸೃಷ್ಟಿಯ ಹೃದಯವೇ

ಆಸೆಯ ಕಡಲನು ಮರೆತು, ಆಗಸದಡಿಯಲಿ ಕುಳಿತು
ದೃಷ್ಟಿಯ ಭಾವವ ಅರಿತು, ಸೃಷ್ಟಿಯ ಸ್ನೇಹವ ಪಡೆದು
ಚೇತನದ ಚೆಲುವಲಿ ಬೆರೆತು, ಅನಂತದನಂತತೆಯಲಿ ಉಳಿದು
ನೀ ಪ್ರೀತಿಸು ಸೃಷ್ಟಿಯ ಹೃದಯವ, ನೀ ಆರಾಧಿಸು ಸೃಷ್ಟಿಯ ದೈವವ

ಭಯೋತ್ಪಾದನೆ

ಜಗವು ಬದುಕುತಿರುವುದು ಭಯೋತ್ಪಾದನೆ ನೆರಳಲಿ
ಬದುಕು ವ್ಯರ್ಥವಾಗಿದೆ ಜಾತಿಮತಗಳ ಸಮರದಲಿ
ಮೊಗವು ಮುದುಡಿಕೊಂಡಿದೆ ಹೆಣಗಳ ರಾಶಿಯಲಿ
ಸೃಷ್ಟಿಕರ್ತನ ಸೃಷ್ಟಿಯು ನಶಿಸುತಿದೆ ಅಶಾಂತಿಯಲಿ

ಹುಟ್ಟಿದನು ಮಾನವ ಚಂಚಲ ಮಂಗನಾಗಿ
ಬೆಳೆದನು ಮಾನವ ಶರವೇಗದ ಬಾಣವಾಗಿ
ಹೊಂದಿದನಂತ್ಯವ ಭಯೋತ್ಪಾದನೆಗೆ ಶರಣನಾಗಿ
ಸಾಧಿಸಿದನು ಶೂನ್ಯವ ತಾ ಹುಟ್ಟಿದ ಸಾರ್ಥಕವಾಗಿ

ಜಗತ್ತಿಗೆ ಶಾಂತಿ ಸಂದೇಶ್ ನೀಡಿದ ದೇಶವದಂದು
ಅಶಾಂತಿಯ ನೆಲೆಯಾಗಿ ರಾರಾಜಿಸುತಿದೆ ಇಂದು
ಶಾಂತಿಗಾಗಿ ಹೋರಾಡಿದವರು ನಿಂತಿಹರು ಮೂರ್ತಿಯಾಗಿ
ಹಾಕುತಿಹರು ಹೂಮಾಲೆಯನು ಶಾಂತಿಯ ನೆನಪಿಗಾಗಿ

ಮಾನವನ ಸಾಧನೆಗೆ ಮಾನವನೇ ಆಗಿಹನು ಬಲಿಪಶು
ಇದನೆಲ್ಲವ ಕಂಡು ನಗುತಲಿದೆ ಮುಗ್ಧ ಶಿಶು
ಆ ಮುಗ್ಧ ಶಿಶು ಕೂಡ ಮುಂದಾಗಲಿದೆ ಪಶು
ಧರೆಯಾಗಲಿದೆ ಮುಂದೊಂದು ದಿನ ವ್ಯರ್ಥ ಶಷು

ಅಂದು ಮಾಯವಾಗುತ್ತಿದ್ದವು ಚುಕ್ಕೆಗಳು ಕಪ್ಪು ಮೋಡಗಳಿಂದ
ಇಂದು ಮಾಯವಾಗಿವೆ ಚುಕ್ಕೆಗಳು ಬಿಳಿಯ ಮೋಡಗಳಿಂದ
ಮುಂದೆ ಮಾಯವಾಗಳಿವೆ ಚುಕ್ಕೆಗಳು ಯುದ್ಧ ಮೋಡಗಳಿಂದ
ಒಂದು ದಿನ ಮಾನವನೆ ಮಾಯವಾಗುವನು ಮಾನವನಿಂದ

ಮಿನುಗುತಿದೆ ಚುಕ್ಕೆಯು ಚಂಚಲ ಮನದ ಮೂಲೆಯಲಿ
ಬೆಳೆಯುತಿದೆ ಚುಕ್ಕೆಯು ಅಶಾಂತಿಯ ಕ್ರೂರ ಸಮಾಜದಲಿ
ಮೂಡುತಿದೆ ದ್ವೇಷ ಸರ್ವಸುಂದರ ಅಂತರಾತ್ಮದಲಿ
ಸಿಡಿಯುತಿದೆ ಕಿಚ್ಚು ಮಿನುಗುಚುಕ್ಕೆಯ ಶುಭ್ರ ಬೇರಿನಲಿ

ಜ್ಞಾನವಾಗುತಿದೆ ಜನರಿಗೆ ವಿನಾಶದ ಬಾಣ
ಅಜ್ಞಾನದ ತುತ್ತತುದಿಗೆರಿದೆ ಮಾನವನ ಮನ
ಮಾನವನ ಅಂತರಾತ್ಮವನಾವರಿಸಿದೆ ಭಯದ ಮಸಣ
ಭಯೋತ್ಪಾದನೆ ತೊಲಗಿಸುತಿದೆ ಮಾನವನ ಮಾನ

Tuesday, November 4, 2008

ಭವ್ಯ ಭಾರತ

ಈ ಭವ್ಯನಾಡ ಬೆಳಕಿನಲಿ ಕಾಣುತಿರುವುದು ಹಸಿರು
ಇದರ ಹಸಿರಿನ ಉಸಿರಲಿ ಕುಣಿಯುತಿಹದು ನವಿಲು
ಆ ನವಿಲ ನಗೆಯ ಕಣ್ಣಲಿ ಮಿಂಚುತಿಹುದು ಪ್ರೇಮವು
ದೇಶಪ್ರೇಮದ ಗಾಳಿಯಲಿ ಹಾರುತಿಹುದು ತ್ರಿವರ್ಣಧ್ವಜವು

ಹರಿಯುತಿರುವ ನದಿಯು ಸಹಿತ ಹಾಡುತಿದೆ ಗೀತೆಯನು
ಅರಳುತಿರುವ ಕಮಲವು ನಮಿಸುತಿದೆ ನಾಡನು
ಗರ್ಜಿಸುವ ಹುಲಿಯು ನೆನೆಯುತಿದೆ ನಾಯಕರನು
ಈ ದಿವ್ಯನಾಡ ಕೀರ್ತಿಯನು ಬೆಳಗುತಿದೆ ಜಗವನು

ದೀರ್ಘ ಕಾಲದ ಉಸಿರಲಿ ಅಸಂಖ್ಯ ಗಣ್ಯರು ಜನಿಸಿದರು
ಅಲ್ಪಕಾಲದ ಆಯುವಲಿ ಅಮೂಲ್ಯ ಕೊಡುಗೆಯ ನೀಡಿದರು
ಅವರ ಯಶಸಿನ ಸ್ಫೂರ್ತಿಯು ಈ ನಾಡ ಮಣ್ಣಿನ ಮಹಿಮೆಯು
ಈ ನಾಡ ಮಹಿಮೆಯನರಿಯಲು ನೂರು ಜನುಮಗಳು ಸಾಲವು

ಹುಟ್ಟುವ ಪ್ರತಿ ಮಗುವಲಿ ಶಾಂತಿ ಅಹಿಂಸೆ ತುಂಬಲಿ
ಯುವಕರ ಮನದಲಿ ತ್ಯಾಗದೀಪವು ಬೆಳಗಲಿ
ದೇಹದ ಅಣು ಅಣುವಲಿ ದೇಶಪ್ರೇಮ ಮೂಡಲಿ
ಹಾರುವ ಬಾವುಟದ ಭವಿಷ್ಯ ಉಜ್ವಲವಾಗಲಿ

Saturday, November 1, 2008

ಜೀವನ

ಈ ಮೂರು ಪದಗಳ ಶಬ್ದವಡಗಿದೆ ಮೂರು ಕ್ಷಣಗಳ ಮನದಲಿ
ಆ ಮೂರು ಕ್ಷಣಗಳೂ ಮರೆತುಬಿಡುವವು ಸವಿನೋಟದ ಮಡಿಲಲಿ
ಕಳೆಯುತಿರುವೆವು ಕ್ಷಣಕ್ಷಣವನು ನಿತ್ಯಸತ್ಯದ ಭಯದಲಿ
ಮರೆಯುತಿರುವೆವು ಗುರಿಯನು ಅಹಂಕಾರದ ಉಸಿರಲಿ

ಹಣದ ಚರಣದಲಿ ನಡೆಯುತಿದೆ ಜೀವನದ ಉದರ
ಮನದ ಮರಣದಲಿ ಮುಳುಗುತಿದೆ ಜೀವನದ ಸಮರ
ಭಾವನೆಗಳ ಬಲಿಯಲಿ ಬದುಕುತಿರುವುದು ಮರ್ಮರ
ನೆನಪುಗಳ ಆಗಸದಲಿ ತೇಲಾಡುವುದು ಮಧುರ

ಮನದ ಶಕ್ತಿಯು ಮುಳುಗುತಿದೆ ಜೀವಸಾಗರದ ಮೂಲೆಯಲಿ
ಸಾವುನೋವುಗಳು ಕಾಡುತಿವೆ ಮೊಡಮುಸುಕಿದ ಮಾಯೆಯಲಿ
ಯುದ್ಧಜಗಳಗಳ ಬಾಣಗಳು ಸಾಗುತಿವೆ ವೇಗದಲಿ
ಜೀವನದ ಗುರಿಗಳು ಮಡಿಯುತಿವೆ ಅಸಹಾಯಕತೆಯ ದ್ವಾರದಲಿ

ಜ್ಞಾನವಾಗುತಿದೆ ನಿರ್ಜೀವ ಧನಕೆ ಮಾನ ಕೊಡುವ ಯಂತ್ರ
ಮಾನವಾಗುತಿದೆ ಸುಖದ ಜೀವನವನು ಮುಳುಗಿಸುವ ಮಂತ್ರ
ದುರಾಸೆಯಲಿ ಹೂಡುತಿಹನು ಜೀವನಾಶದ ತಂತ್ರ
ಧನದ ಮಾಯಾಲೋಕದಿಂದ ಎಂದಾಗುವುದು ಸ್ವತಂತ್ರ

ಹುಟ್ಟುವಾಗ ಅಳುವುದು ದುಃಖಜಗದ ಸೂಚಕವಾಗಿ
ಬೆಳೆಯುವಾಗ ಸಹಿಸಬೇಕು ಸಮಾಜದ ಶಾಂತಿಗಾಗಿ
ನೀಡಬೇಕು ಅಮೂಲ್ಯ ಕೊದುಗೆಯನು ಜಗದೊಳಿತಿಗಾಗಿ
ನಶಿಸುವಾಗ ನಗಬೇಕು ಜೀವನಜಯದ ಹೆಮ್ಮೆಗಾಗಿ

ಕ್ಷಣಿಕ ಜೀವನದಲಿ ಹೊಳೆಯಬೇಕು ತಾರೆಯಂತೆ
ಸೋಲಿನ್ನಂತರ ಜಯಕಾಗಿ ದುಡಿಯಬೇಕು ಇರುವೆಯಂತೆ
ಯಶದ ತುದಿಯ ಮುಟ್ಟಲು ಪ್ರಯತ್ನಿಸಬೇಕು ಭಾಗೀರಥನಂತೆ
ಜೀವನದ ಗುರಿಯನು ಶರವೇಗದಿಂದ ಮುಟ್ಟಬೇಕಂತೆ

ಜ್ಞಾನಕ್ಕಾಗಿ ಬಳಸಬೇಕು ಜೀವನದ ಜೀವವನು
ಜೀವದಲ್ಲಿ ಕಾಣಬೇಕು ಜೀವನದ ಆತ್ಮವನು
ಜೀವನದಾತ್ಮದಲಿ ಹುಡುಕಬೇಕು ಜೀವನದ ಶಾಂತಿಯನು
ಜೀವದಲೇ ಅನುಭವಿಸಬೇಕು ಜೀವನದ ಸಾರ್ಥಕತೆಯನು

ಮಾನವ

ಓ ಭುವಿಯ ಮಾನವ ನೀನಾಗುತಿರುವೆ ಅತಲದ ದಾನವ
ನೀ ಮಾಡುವ ಕಾರ್ಯವ ದೇವರಲ್ಲಿ ಬರೆಯುವ
ಆ ವಿಧಿಯು ಬರೆದ ಬರೆಹವ ನೀನಿಲ್ಲಿ ಅಲೆಸುವೆ
ನೀ ಮಾಡಿದ ಪಾಪವ ನಾನಿಲ್ಲಿ ಬರೆಯುವೆ

ಸೃಷ್ಟಿಸಿದ ಸೃಷ್ಟಿಗೆ ಎರಡು ಬಗೆದ ದ್ರೋಹಿಯೇ
ಜನ್ಮಕೊಟ್ಟ ಜನನಿಯ ರಕ್ಷಿಸದ ಪಾಪಿಯೇ
ಪೋಷಿಸಿದ ದೇಶವ ಮರೆತ ದೇಶದ್ರೋಹಿಯೇ
ನಿನ್ನಂತರಾತ್ಮಕೆ ಮೋಸಮಾಡಿದ ಅಧಮಿಯೇ

ಪ್ರತಿಷ್ಠೆಗಾಗಿ ಕಟ್ಟಿದೆ ಗಗನಚುಂಬಿ ಕಟ್ಟಡಗಳನು
ಧರ್ಮಕ್ಕಾಗಿ ಹೊಂದಿದೆ ಹೇಡಿತನದ ಸಾವನು
ಹಣಕ್ಕಾಗಿ ಮಾರಿದೆ ನಿನ್ನದಾದ ನಿನ್ನತನವನು
ಶಾಂತಿಗಾಗಿ ಹೋರಾಡಿ ಉಳಿಸಿಕೊ ಮಾನವೀಯತೆಯನು

ಅಜ್ಞಾನದಿಂದ ವಿಜ್ಞಾನಿ ಕಂಡುಹಿಡಿದ ವಿನಾಶದ ವಸ್ತುವನ್ನು
ಅಹಂಕಾರದಿಂದ ಉಗ್ರಗಾಮಿ ಮಾಡಿದ ಅಮಾಯಕರ ನಾಶವನು
ಸೇಡಿನಿಂದ ಬೆಂಕಿಯುಗುಲಿ, ಹಾಕಿದ ಅಶಾಂತಿಯ ಹಾರವನು
ಮೂರ್ಖರ ಯುದ್ಧದಲಿ ಕೊಟ್ಯಾರು ಮುಗ್ಧರು ಅಪ್ಪಿದರು ಸಾವನು

ಸೂರ್ಯನ ಕಿರಣಗಳನು ಕಂಡು ನಡುಗುತಿದೆ ಭುವಿಯು
ಭೂತಾಯಿಯ ಕಂಡು ನಗುತಿವೆ ಅನ್ಯ ಗ್ರಹಗಳು
ಚಂದ್ರನ ಸುಂದರತೆಯ ಕಂಡು ಮೂಗುಮುರಿಯುತಿದೆ ಭುವಿಯು
ಓ ಮಾನವ ಉಳಿಸು ನಿನ್ನ ಭೂತಾಯಿಯ ಮಾನವನು

ಹಕ್ಕಿಯು ಹಾರುತಿದೆ ಸೃಷ್ಟಿಯ ಸೋಬಗಿನಲಿ
ದುಂಬಿಯು ಅಲೆಯುತಿದೆ ಸವಿಜೇನಿನ ಸ್ಮರಣೆಯಲಿ
ಮೇಘಗಳು ಅಪ್ಪುತಿವೆ ಏಕತೆಯ ಆನಂದದಲಿ
ಮಾನವನು ಬದುಕುತಿರುವನು ಆಸೆಯೆಂಬ ವಿಷದಲಿ

ಏರುತಿಹನು ಮಾನವ ಸೃಷ್ಟಿಯ ಅಗೋಚರ ಮೆಟ್ಟಿಲನು
ಪೂಜಿಸುತಿಹನು ಮಾನವ ಸೃಷ್ಟಿಯ ಅಗೋಚರ ಶಕ್ತಿಯನು
ಬದುಕುತಿಹನು ಮಾನವ ಸೃಷ್ಟಿಯ ಆಶ್ರಯದಲಿ
ನಶಿಸುವನು ಮಾನವ ಸೃಷ್ಟಿಯ ಚರಣದಲಿ

ಹೊಸವರುಷ

ನವವರುಷ ಬಂದಿದೆ ಸಂತಸವ ತಂದಿದೆ,
ವಿಕ್ರಮವು ಮುಗಿದು ವಿಷುವು ಈಗ ಬಂದಿದೆ,
ದಿನಗಳುರುಳಿ ಮಾಸಮುಗಿದು ನವವರುಷ ಬಂದಿದೆ,
ಅನ್ಯಾಯ ಅನೀತಿ ಅಧರ್ಮಗಳಿನ್ನು ನೆಲಸಿವೆ.

ನೀರಮೇಲ ಗುಳ್ಳೆಗೆ ನೀರ ನುಂಗುವಾಸೆ,
ಆಗಸದ ಬಿಲ್ಲಿಗೆ ವಿಶ್ವವನಾಕ್ರಮಿಸುವಾಸೆ,
ಮುಳುಗುತಿರುವ ಸೂರ್ಯನಿಗೆ ಮರಳಿ ಮೂಡುವಾಸೆ,
ಹೊಸವರುಷದ ಸಂತಸವನುಭವಿಸುವಾಸೆ.

ಜಾತಿ ಧರ್ಮ ಮತಗಳ ಭೇದಭಾವ ಮೂಡಿವೆ,
ಕಲಹ ಜಗಳ ಯುದ್ಧಗಳು ನಾಶವನು ಮಾಡಿವೆ,
ಮನುಜನ ಮೂರ್ಖತೆಗೆ ಮೂಕಪ್ರಾಣಿಗಳು ಬಲಿಯಾಗಿವೆ,
ಕತ್ತಲನು ತೊಲಗಿಸುವಂತೆ ಹೊಸವರುಷಕೆ ಬೇಡುವೆ.

ತನ್ನ ನೆರಳ ಹಿಡಿಯಲು ಹೊರಟಿಹನು ಮಾನವ,
ಬೇರೆಯವರ ನೆರಳನಲಿಸಲು ಹುರಿದುಂಬಿಸುತಿಹನು ಮಾನವ,
ಆ ನೆರಳಿಗೆ ಕಾರಣ ಬೇರೊಬ್ಬವ ಎಂದು ತಿಳಿಯದವ,
ಕಪ್ಪು ನೆರಳನಲಿಸೆಂದು ಹೊಸವರುಷಕೆ ಬೇಡುವೆ.

ದಿನ ಕಳೆದು ರಾತ್ರಿಯಾಗಿ ಚೈತ್ರ ಮರಳಿ ಬರುತದೆ,
ಹೊಸ ವರುಷಗಳು ಕಳೆದು ಯುಗಗಳುರುಳುತ್ತವೆ,
ಮನುಜ ಶರೀರ ಹೋರಾಡಿ ಅಂತ್ಯಗೊಳ್ಳುತ್ತದೆ,
ಹೊಸ ಹೊಸ ಆಸೆಗಳು ಮೂಡುತಲೇ ಇರುತ್ತವೆ.

ಹುಟ್ಟು ಸಾವಿನ ನಿಗೂಢತೆಯ ತಿಳಿಯಬಯಸುವ ಮಾನವ,
ಬದುಕಿನರ್ಥವ ತಿಳಿಯದೆ ಆಗಿಹನು ದಾನವ,
ದೂರವಿರುವ ಸಾವು ಸಹಿತ ಓಡಿಬರುತಿದೆ ಸನಿಹ,
ಹೊಸವರುಷವು ಬರುತಿದೆ ಸಂತೈಸಲು ಮಾನವ.

ಇದಿದನು ಬಿಟ್ಟು ಇರದಿದನು ಬಯಸುವ ಜೀವಿ,
ಅದರ ಬಯಕೆಯಲಿ ಆಗಿಹನು ನಿರ್ಜೀವಿ,
ಸಾಧ್ಯವಿರುವುದನು ಬಯಸಿ ಆಗಬೇಕು ವಿಜಯಿ,
ಹೊಸವರುಷದ ಕೃಪೆಯಿಂದ ಈ ಬಯಕೆ ಹರಸಲಿ.