Saturday, November 1, 2008

ಹೊಸವರುಷ

ನವವರುಷ ಬಂದಿದೆ ಸಂತಸವ ತಂದಿದೆ,
ವಿಕ್ರಮವು ಮುಗಿದು ವಿಷುವು ಈಗ ಬಂದಿದೆ,
ದಿನಗಳುರುಳಿ ಮಾಸಮುಗಿದು ನವವರುಷ ಬಂದಿದೆ,
ಅನ್ಯಾಯ ಅನೀತಿ ಅಧರ್ಮಗಳಿನ್ನು ನೆಲಸಿವೆ.

ನೀರಮೇಲ ಗುಳ್ಳೆಗೆ ನೀರ ನುಂಗುವಾಸೆ,
ಆಗಸದ ಬಿಲ್ಲಿಗೆ ವಿಶ್ವವನಾಕ್ರಮಿಸುವಾಸೆ,
ಮುಳುಗುತಿರುವ ಸೂರ್ಯನಿಗೆ ಮರಳಿ ಮೂಡುವಾಸೆ,
ಹೊಸವರುಷದ ಸಂತಸವನುಭವಿಸುವಾಸೆ.

ಜಾತಿ ಧರ್ಮ ಮತಗಳ ಭೇದಭಾವ ಮೂಡಿವೆ,
ಕಲಹ ಜಗಳ ಯುದ್ಧಗಳು ನಾಶವನು ಮಾಡಿವೆ,
ಮನುಜನ ಮೂರ್ಖತೆಗೆ ಮೂಕಪ್ರಾಣಿಗಳು ಬಲಿಯಾಗಿವೆ,
ಕತ್ತಲನು ತೊಲಗಿಸುವಂತೆ ಹೊಸವರುಷಕೆ ಬೇಡುವೆ.

ತನ್ನ ನೆರಳ ಹಿಡಿಯಲು ಹೊರಟಿಹನು ಮಾನವ,
ಬೇರೆಯವರ ನೆರಳನಲಿಸಲು ಹುರಿದುಂಬಿಸುತಿಹನು ಮಾನವ,
ಆ ನೆರಳಿಗೆ ಕಾರಣ ಬೇರೊಬ್ಬವ ಎಂದು ತಿಳಿಯದವ,
ಕಪ್ಪು ನೆರಳನಲಿಸೆಂದು ಹೊಸವರುಷಕೆ ಬೇಡುವೆ.

ದಿನ ಕಳೆದು ರಾತ್ರಿಯಾಗಿ ಚೈತ್ರ ಮರಳಿ ಬರುತದೆ,
ಹೊಸ ವರುಷಗಳು ಕಳೆದು ಯುಗಗಳುರುಳುತ್ತವೆ,
ಮನುಜ ಶರೀರ ಹೋರಾಡಿ ಅಂತ್ಯಗೊಳ್ಳುತ್ತದೆ,
ಹೊಸ ಹೊಸ ಆಸೆಗಳು ಮೂಡುತಲೇ ಇರುತ್ತವೆ.

ಹುಟ್ಟು ಸಾವಿನ ನಿಗೂಢತೆಯ ತಿಳಿಯಬಯಸುವ ಮಾನವ,
ಬದುಕಿನರ್ಥವ ತಿಳಿಯದೆ ಆಗಿಹನು ದಾನವ,
ದೂರವಿರುವ ಸಾವು ಸಹಿತ ಓಡಿಬರುತಿದೆ ಸನಿಹ,
ಹೊಸವರುಷವು ಬರುತಿದೆ ಸಂತೈಸಲು ಮಾನವ.

ಇದಿದನು ಬಿಟ್ಟು ಇರದಿದನು ಬಯಸುವ ಜೀವಿ,
ಅದರ ಬಯಕೆಯಲಿ ಆಗಿಹನು ನಿರ್ಜೀವಿ,
ಸಾಧ್ಯವಿರುವುದನು ಬಯಸಿ ಆಗಬೇಕು ವಿಜಯಿ,
ಹೊಸವರುಷದ ಕೃಪೆಯಿಂದ ಈ ಬಯಕೆ ಹರಸಲಿ.

No comments: