Wednesday, November 12, 2008

ಮುರಿದ ಮನಗಳು

ಅರುಣೋದಯ ಕಾಣದೆ, ಮೋಡಗಳನೂ ಹೊರದೆ, ಆಗಸ ಮಳೆಗರೆಯಿತು
ಮನಸಿನ ನೋವುಗಳು ಅಪ್ಪು ಅಳಿದವಂದು, ಮಳೆಯ ಬಾಣಗಳನು
ಮಲಗಿ ಮಲಗಿಯೂ ನಿದ್ದೆ ಹೋಗದ ಹಗುರ ಮನಸು, ಸವಿಯಿತು
ಏನೋ ಕಳೆದುಕೊಂಡು ಏನೋ ಪಡೆದುಕೊಂಡತಹ ಸೊಗಸನು

ಮಧುರ ಮೌನದ ಮೇರೆಯಲಿ, ನೀಡಿದೆ ಊಹೆಗೆ ನಿಲುಕದ ಜೀವನವ
ನಿನಗೆ ಧಾರೆಯೆರೆದ ಪ್ರೀತಿ ಭ್ರಮೆಯೆಂದು ನಾ ಹೇಗೆ ನಂಬಲಿ?
ನಿರ್ಮಲ ನೀಲಿ ಬಾನಲಿ ಚಲಿಸುವ ಶಾಂತ ಚಣಗಳ ರೂಪದಂತಿರುವ
ನಿನ್ನಯ ನಿಸ್ವಾರ್ಥ ನೇಹದುಸಿರನು ನಿಷ್ಕರುಣೆಯಿಂದ ನಾನೇಕೆ ಕೊಲ್ಲಲಿ?

ಪಯಣಿಸುತಿದ್ದೆ ದೋಣಿಯಲಿ, ತೆವಳುವ ತೆರೆಗಳ ದಿಕ್ಕಿನಲ್ಲಿ
ಹಾರಿತು ದೋಣಿ ದಿಗಂತಕೆ, ಬೀಸುವ ಬಿರುಗಾಳಿಯನುಟ್ಟು
ಮುಳುಗಲಾಗದೆ, ಈಜೂಬಾರದೆ, ಬದುಕನರಿಸಿದೆ ಬಂಡೆಯಾಸರೆಯಲಿ
ತೇಲುವೆಯಾ, ಓ ಬಂಡೆಯೇ ದೂರತೀರಕೆ, ಸ್ನೇಹಕಿರೀಟವ ತೊಟ್ಟು?

No comments: