Friday, November 21, 2008

ಕೊನೆಯ ಉಡುಗೊರೆ

ನೀನರಿಯೆಯಾ ನನ್ನ, ಹೊಂಬಿಸಿಲಲಿ ಹೊಳೆವ ಹವಳದಂತಾ ನನ್ನ ಕಣ್ಣ?
ಹಸಿದ ಹೊಟ್ಟೆಯಲೂ ನಿನ್ನ ಕನಸನೇ ಕಂಡ ಹೂವಿನಂತಾ ನನ್ನ ಮನಸ್ನ?
ಹರಿದು ಹೋದಿ ಮತ್ಯಾಕ ನನ್ಮನದೊಳಗ ಹೊಳೆಹಾಂಗ, ಹನಿಯೊಂದನುಣಲೂ ಕೊಡದ?
ಬನವೆಲ್ಲ ಬರಿದಾಗಿ ಬರಡಾತು ಭೂಮಿ, ಬಾಡಿಹೋತು ಬದುಕು ನೀನಿಲ್ದ

ಕೊನೆವರೆಗೂ ನಿನ್ನ ಬಯಸಿದ ಮನಸು, ಕಗ್ಗತ್ತಲಲೂ ನಿನ್ನನೆ ಕಲ್ಪಿಸುವಂತಾ ಹುಚ್ಚು ವಯಸು
ಬೆಳಗಾತು, ಬಾಗಿಲಲಿ ಕಾದು ಕಾದು ನಿನ್ನ ಹಾದಿ, ಜೀವಾನ ಗಟ್ಟಿ ಹಿಡಿತ
ತೋರಣಾನ ಮುತ್ತಿದ ಇಬ್ಬನಿ, ಕರಗಿ ಕಚ್ಚಿತು ನನ್ನ ಕಣ್ಣ ರೆಪ್ಪಿನ
ತಂಪು ಕಣ್ಣುಗಳನಾವರಿಸಿ ತಂತು ಹಿತವಾದ ಹರೆಯದ ನೆನಪುಗಳನ
ಸಾಕಿಂತಾ ಜೀವನ, ಪ್ರೀತಿಯಿಲ್ಲದ ಪಯಣ, ನಾ ಕೊಲ್ಲಬಲ್ಲೆನಾ ಈ ನೆನಪುಗಳನ?
ಯಾವಾಗ ಬರುವಿ ಹೇಳು ನಮ್ಮನಿಗ, ನಿನ್ನ ಪೂಜಿಸುವ ಗುಡಿಗ, ನಾ ಸಾಯುವ ಮೊದಲು
ನನ್ನಾತ್ಮಾನ ಸುಟ್ಟು ಹಚ್ಚತೀನಿ ದೀಪ, ನನ್ನ ಕೊನೆಯುಸಿರ್ನ ನಿನಗುಡುಗರೆಯಾಗಿ ಕೊಡಲು

No comments: