Wednesday, November 12, 2008

ಅಮ್ಮ ಅಮ್ಮ

ನಾ ಕಂಡ ಭುವಿಯ ಮಹದೇಕ ದೇವತೆ
ನಾ ನುಡಿವ ಪದವ ಕಲಿಸಿದ ಗುರುಮಾತೆ
ಮೂರುಜನುಮಗಳ ಮಧುರ ಅನುಭವಗಳ ವನಿತೆ
ನಾ ಬರೆಯುವೆ ನಿನಗಾಗಿ ಈ ಸವಿ ಕವಿತೆ

ಜೇನುಗೂಡಲಿ ಕೈ ಹಾಕಿ ತಿನಿಸಿದೆನಗೆ ಸವಿಜೇನನು
ಜ್ಞಾನ ಸಾಗರದ ದೇವಿಯೇ ನೀಡಿದೆನಗೆ ಸುಜ್ಞಾನವನು
ಜೀವಸಾಗರದಲಿ ಈಜಿ ಮುತ್ತಿಸಿದೆನ್ನ ದಡವನು
ಹೇಗೆ ತೀರಿಸಲಿ ನಿನ್ನ ಮೂರು ಜನುಮಗಳ ಋಣವನು?

ಮಮತೆಯ ಮಾನಿಕ್ಯಕ್ಕೆ ಕರಗುತಿದೆ ವಜ್ರವು
ತ್ಯಾಗದ ತೇರಿಗೆ ನಮಿಸುತಿಹನು ದೇವರು
ಕರುಣೆಯ ಕಾರಂಜಿಯಲಿ ಬದುಕುತಿಹುದು ಜಗವು
ಶಾಂತಿ ಸಹನೆಯ ದೇವತೆಗೆ ಕೈಮುಗಿವೆನು ನಾನು

ಕಳೆಯುತಿಹೆನು ಕ್ಷಣಕ್ಷಣವನು ಜೀವದಾತೆಯ ಉಸಿರಲಿ
ಮಲಗುತಿಹೇನು ದಿನದಿನವು ನಿನ್ನ ಮಾಮತೆಯ ಮಡಿಲಲಿ
ಪೂಜಿಸುತಿಹೇನು ನಿನ್ನ ಪರಿಶುದ್ಧವಾದ ಎನ್ನ ಮನದಲಿ
ಧ್ಯನಿಸುತಿಹೇನು ನಿನ್ನ ನಿರ್ವಿಕಾರ ಎನ್ನಂತರಾತ್ಮದಲಿ

ಹಸಿದ ಹುಡುಗನ ಹಸಿವಿನ ಆಳ ನಿನ್ನ ಪ್ರೀತಿ
ಹಬ್ಬಿದ ಬಿಲ್ಲಿನ ಬಣ್ಣದ ಮಾತು ನಿನ್ನ ಕೀರ್ತಿ
ಬ್ರಹ್ಮನು ಬರೆದ ಸೃಷ್ಟಿಯ ಹಾಡು ನಿನ್ನ ನೀತಿ
ನಾನು ಕೆತ್ತಿದ ಮಮತೆಯ ಹೂವೆ ನಿನ್ನ ಮೂರ್ತಿ

ಹಕ್ಕಿಯು ತೇಲುತಿದೆ ಸಂತಸದಾಗಸದಲಿ
ದುಂಬಿಯು ಹಾರುತಿದೆ ಹಾಡುವ ಹೂವಿನಲಿ
ಕಿರಣವು ಮಿಂಚುತಿದೆ ಅಲೆಗಳ ಆಸೆಯಲಿ
ನಾನು ಬದುಕುತಿರುವುದು ನಿನ್ನ ಹೃದಯದ ಜೀವದಲಿ

ಅಳುವ ಕಂದನ ಕರುಳಿನ ಕೂಗು ಅಮ್ಮ ಅಮ್ಮ
ನಲಿವ ನವಿಲಿನ ನಾದದ ನಾಮ ಅಮ್ಮ ಅಮ್ಮ
ಅರಳುವ ಹೂವಿನ ಹರ್ಷದ ಹಾಡು ಅಮ್ಮ ಅಮ್ಮ
ನನ್ನ ಉಸಿರಿನ ಹೃದಯದ ಜೀವ ಅಮ್ಮ ಅಮ್ಮ

No comments: