Wednesday, November 12, 2008

ಮೌನ ನೆನಪು

ಇದು ನಿನಗಾಗಿ ಬರೆದ ನನ್ನ ಮೌನ ಮನಸಿನ ಮಧುರ ಸಂದೇಶ
ಹೂಮುಡಿದ ಪದಗಳ ಜೋಡಿಸಿ ನೀಡುವೆ ನಿನ್ಮನಕೆ ನೂತನ ಸ್ಪರುಷ
ನಿನ್ನಯ ಸಂಜೀವಿನಿ ಸ್ನೇಹಕೆ ಸೋತು ಹರಿಸುವೆ ಹಿತವಾದ ಹರುಷ
ಈ ದಿನಕಾಗಿ ಕಾದು ಕೊಡುವೆ ಪೂರ್ಣಿಮೆ ಪರಿಮಳವ ಪ್ರತಿ ವರುಷ

ಹಾರಿ ಹಾರಿ ಹಿಡಿಯಹೋದೆ, ನಿನಗಾಗಿ ಹಸಿರು ಹಕ್ಕಿಯೊಂದನು
ಭುವಿಬಾನುಗಳು ಬರಿದಾದರೂ ಬಿಡನೆನ್ನಚಲ ಹಠವನು
ಬೆಳಕು ಬಾಡಿ ಇರುಳರಳುವುದರಲಿ ಹಿಡಿದದಕೆ ನಿನ್ನ ಹೆಸರಿಟ್ಟೆನು
ಅದರ ಹಾಡಿಗೆನ್ನೆದೆಬಡಿತವ ಪೋಣಿಸಿ ಸಂಗೀತದುಡುಗರೆಯ ಕೊಡುವೆನು

ಮನಸಲೇ ಮನೆಯ ಬೆಳೆಸುವೆನು ಸವಿಯುತ ಸಾಗರದ ಸೌಂದರ್ಯವನು
ಉಸಿರಿನ ಬಿಸಿಯನೇ ಬಳಸುವೆನು, ಬೆಳಗಲು ಭಾವನೆಯೆ ಬಾಗಿಲನು
ನೇಸರನ ಕಿರಣಗಳನೇ ಉಂಡು, ಇರುಳಿಡೀ ಮನೆಗೆ ದೀವಿಗೆಯಾಗುವೆನು
ನೇಹದ ಸ್ಪರುಷವನ್ನೀಡುವ ಗೋಡೆಗಳನು, ನಿನ್ನಯ ನೆನಪುಗಳಿಂದಲಂಕರಿಸುವೆನು

ಹಸಿವನೇ ಕೊಂದು ಹೊತ್ತು ತರುವೆನು ನಿನಗಾಗಿ, ಪ್ರೀತಿಯ ಪಲ್ಲಕ್ಕಿಯಲಿ ಪ್ರೇಮದಮೃತವ
ಪ್ರಾಣವನೇ ಪಣತೊಟ್ಟು ಕೊಡುವೆನು ನಿನಗೆ ಪ್ರತಿಚಣವೂ ಹೊಸಜನುಮದನುಭವವ
ಈ ದಿನವೂ ನಿನ್ನ ಪ್ರತಿದಿನದ ದನಿಯಾಗಲಿ, ಕೊಡಲಿ ಸ್ವರ ರಾಗಗಳು ನಿನಗೆ ನಿರ್ಮಲ ರೂಪವ
ಮೌನದನಂತತೆಯು ನಿರಂತರವಾಗಿರಲಿ, ನೀಡಲಿ ಸಮಯವು ನಿನಗೆ ಸತ್ಯಸ್ವರೂಪವ

No comments: